ತಿರುಮಲೆ ವೈದ್ಯ
ಸು. 1650.ಕನ್ನಡನಾಡಿನ ಒಬ್ಬ ಬ್ರಾಹ್ಮಣ ಕವಿ. ಈತನ ತಂದೆ ಮೇದಿನಿಗೆ ಹೆಸರಾದ ಗವಿಯಣ. ಈತ ಉತ್ತರರಾಮಾಯಣವೆಂಬ ಭಾಮಿನೀ ಷಟ್ಪದಿ ಕಾವ್ಯವೊಂದನ್ನು ಬರೆದಿದ್ದಾನೆ. ಇದು ವಾಲ್ಮೀಕಿ ರಾಮಾಯಣದ ಉತ್ತರಕಾಂಡದ ಕನ್ನಡಾನುವಾದ. ತೊರವೆ ರಾಮಾಯಣದ ಕರ್ತೃ ಕುಮಾರವಾಲ್ಮೀಕಿ ಕನ್ನಡಿಸದೆ ಬಿಟ್ಟ ಉತ್ತರಕಾಂಡವನ್ನು ಈತ ರಚಿಸಿರಬಹುದೆಂಬ ಕವಿಚರಿತಕಾರರು ಊಹಿಸಿದ್ದಾರೆ. ಈ ಕವಿಯ ವಿಚಾರವಾಗಿ ಮತ್ತಾವ ಸಂಗತಿಗಳೂ ತಿಳಿದುಬಂದಿಲ್ಲ. 
ಉತ್ತರರಾಮಾಯಣ ಕೃತಿಯಲ್ಲಿ 20 ಸಂಧಿಗಳೂ 1,019 ಪದ್ಯಗಳೂ ಇವೆ. ಈತನ ವರ್ಣನಾ ಸಾಮಥ್ರ್ಯಕ್ಕೆ ನಿದರ್ಶನವಾಗಿ ಒಂದು ಪದ್ಯವನ್ನು ನೋಡಬಹುದು. 

		ಮತ್ತೆ ಕತ್ತಲೆಯೆಂಬ ದಂತಿಯ
		ನೆತ್ತಿಯೊಡನೊಡೆದುಚ್ಚುಳಿಪ ಪೆ
		ರ್ಮುತ್ತೊ ತಾರಾಮೌಕ್ತಿಕವ್ರಜಜನ್ಮಶುಕ್ತಿಕೆಯೊ ||
		ಬಿತ್ತರದ ಕೌಮುದಿಯ ಬೆಳಗಿನ
		ಬಿತ್ತೊ ತಾನೆನೆ ಪೂರ್ವಪರ್ವತ
		ದುತ್ತಮಾಂಗವನಡರಿದನು ವಿಧುವಧಿಕ ತೇಜದಲಿ||
(ಟಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ